మంగళవారం, సెప్టెంబర్ 13, 2011

MANTRALAYA

ಕಲಿಯುಗದ ಕಾಮಧೇನು ಗುರುರಾಯರು ನೆಲೆಸಿಹ ಮಂತ್ರಾಲಯ
ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ...

mantralaya temple,  kannadaratna.com, ourtemples.in, ಕನ್ನಡರತ್ನ.ಕಾಂ, ನಮ್ಮದೇವಾಲಯಗಳುಮಂಚಾಲೆ ಆಂಧ್ರಪ್ರದೇಶದಲ್ಲಿರುವ ಒಂದು ಪುಟ್ಟ ಊರು. ಆದರೆ, ಈ ಸ್ಥಳ ಗುರುರಾಯರ ಕೃಪೆಯಿಂದ ವಿಶ್ವಭೂಪಟದಲ್ಲಿ ವಿಶಿಷ್ಟ ಸ್ಥಾನಪಡೆದಿದೆ. ಮಂಚಾಲೆ ಎಂಬುದು ಮಂತ್ರಾಲಯ ಕ್ಷೇತ್ರಕ್ಕಿದ್ದ ಹಿಂದಿನ ಹೆಸರು. ಈ ಪವಿತ್ರ ಪುಣ್ಯಸ್ಥಳದಲ್ಲಿ ಭಕ್ತರ ಸಕಲ ಇಷ್ಟಾರ್ಥಗಳನ್ನೂ ಈಡೇರಿಸುವ ಕಲಿಯುಗದ ಕಾಮಧೇನು ಗುರುರಾಘವೇಂದ್ರರು ಸಜೀವ ಬೃಂದಾವನಸ್ಥರಾಗಿದ್ದಾರೆ.
ಶ್ರೀರಾಘವೇಂದ್ರಸ್ವಾಮಿಗಳ ಅಲೌಕಿಕ, ಧಾರ್ಮಿಕ ತೇಜಸ್ಸು ಮತ್ತು ತಪೋಬಲ ಇಲ್ಲಿಗೆ ಭೇಟಿನೀಡುವ ಭಕ್ತರ ಮನೆ-ಮನವನ್ನು ಸದಾ ಬೆಳಗುತ್ತದೆ. ಗುರುರಾಯರ ಈ ತಪೋಭೂಮಿಗೊಮ್ಮೆ ಬಂದು ತಮ್ಮ ಜನ್ಮ ಸಾರ್ಥಕಪಡಿಸಿಕೊಳ್ಳಬೇಕೆಂದು ನಿತ್ಯವೂ ಸಾವಿರಾರು ಭಕ್ತರು ಆಗಮಿಸುತ್ತಾರೆ.
ದೇವರೆಂದರೆ ತಿರುಪತಿಯ ತಿಮ್ಮಪ್ಪ, ಗುರುಗಳೆದರೆ ಮಂತ್ರಾಲಯದ ರಾಘಪ್ಪ ಎನ್ನುವ ಭಕ್ತರು, ಸಜೀವವಾಗಿ ಬೃಂದಾವನದಲ್ಲಿ ತಪೋನಿರತರಾಗಿರುವ ಗುರುಗಳ ಪಾದಧೂಳಿನಿಂದ ಪವಿತ್ರವಾಗಿರುವ ಈ ಕ್ಷೇತ್ರಕ್ಕೆ ಬಂದು ಪಾವನರಾಗುತ್ತಾರೆ. ಜಾತಿ-ಮತ-ಬೇಧಗಳಿಲ್ಲದ ಈ ಸ್ಥಳಕ್ಕೆ ಆಗಮಿಸುವ ಭಕ್ತಕೋಟಿ ತುಂಗಾನದಿಯಲ್ಲಿ ಮಿಂದು ಮಂಚಾಲಮ್ಮನ ದರ್ಶನ ಮಾಡಿ, ಗುರುರಾಯರ ದರ್ಶನ ಮಾಡಿ ಧನ್ಯಭಾವದಿಂದ ತಮ್ಮೂರಿಗೆ ಮರಳುತ್ತಾರೆ.
Raghavendraswamy mutt,  kannadaratna.com, ourtemples.in, ಕನ್ನಡರತ್ನ.ಕಾಂ, ನಮ್ಮದೇವಾಲಯಗಳುದೇಶಾದ್ಯಂತ ರಾಯರ ಮಠಗಳು : ಕೇವಲ ದಶಕಗಳ ಹಿಂದೆ ಕೇವಲ ಒಂದು ಧಾರ್ಮಿಕ ಕೇಂದ್ರವಾಗಿದ್ದ ಮಂತ್ರಾಲಯ ಇಂದು ಶೈಕ್ಷಣಿಕ ಕೇಂದ್ರವಾಗಿ, ಆರೋಗ್ಯದ ತಾಣವಾಗಿ, ಜ್ಞಾನವೈಜ್ಞಾನಿಕ ಕ್ಷೇತ್ರವಾಗಿ ಹೊರಹೊಮ್ಮಿದೆ. ಶ್ರೀಮಠ ಒಂದು ಬೃಹತ್ ಸಂಸ್ಥೆಯಾಗಿ ಮಾರ್ಪಟ್ಟಿದೆ. ಮಠದ ವತಿಯಿಂದ ದೇಶದ ನಾನಾ ಮೂಲೆಗಳಲ್ಲಿ ೧೬೦ಕ್ಕೂ ಹೆಚ್ಚು ಮೃತ್ತಿಕಾ ಬೃಂದಾವನ ನಿರ್ಮಿಸಲಾಗಿದೆ. ಮೂಲಮಠದ ಆಡಳಿತದ ನಿಯಂತ್ರಣದಲ್ಲಿಯೇ ಕರ್ನಾಟಕ, ಆಂಧ್ರ, ಕಾಶಿ, ಬದರಿ, ದೆಹಲಿ, ಮುಂಬೈ ಸೇರಿದಂತೆ ನಾನಾ ಭಾಗಗಳಲ್ಲಿ ೩೪ ಶಾಖಾ ಮಠ ಸ್ಥಾಪಿಸಲಾಗಿದೆ.
ಈ ಎಲ್ಲ ಮಠಗಳೂ ಸುಸಜ್ಜಿತ ಕಾರ್ಯಾಲಯಗಳನ್ನು ಹೊಂದಿವೆ. ಈ ಮಠಗಳಿಗೆ ಮೂಲಮಠವೇ ಸಿಬ್ಬಂದಿಯ ನೇಮಕ ಮಾಡುತ್ತದೆ. ಮಠದ ಪರಂಪರೆಗನುಗುಣವಾಗಿ ಸಾಂಪ್ರದಾಯಿಕ - ಸಾಂಸ್ಕೃತಿಕ ಚಟುವಟಿಕೆಗಳು ಜರುಗುತ್ತವೆ. ಮಠಕ್ಕೆ ಹೊಂದಿಕೊಂಡಂತೆ ಕಲ್ಯಾಣಮಂಟಪಗಳನ್ನು ನಿರ್ಮಿಸಿದ್ದು, ಇಲ್ಲಿ ಧಾರ್ಮಿಕ - ಸಾಂಸ್ಕೃತಿಕ ಚಟುವಿಕೆಗಳೂ ಜರುಗುತ್ತವೆ. ಜ್ಞಾನಪ್ರಸಾರದ ಕೇಂದ್ರಗಳಾಗಿಯೂ ಇವು ಕೆಲಸ ಮಾಡುತ್ತವೆ. ದೇಶಾದ್ಯಂತ ಇಷ್ಟೊಂದು ಶಾಖೆಗಳನ್ನುಳ್ಳ ಏಕೈಕ ಮಠ ಇದಾಗಿದೆ.
ಊಟ - ವಸತಿ : ಮಂತ್ರಾಲಯದಲ್ಲಿ ಸುಸಜ್ಜಿತ ಸಂಸ್ಕೃತ ವಿದ್ಯಾಲಯ ರೂಪುಗೊಂಡಿದೆ, ಯಾತ್ರಾತ್ರಿಗಳಿಗಾಗಿ ಸುಸಜ್ಜಿತ ವಸತಿ ನಿಲಯಗಳನ್ನು ನಿರ್ಮಿಸಲಾಗಿದೆ. ಯಾತ್ರಾರ್ಥಿಗಳ ಆರೋಗ್ಯ ರಕ್ಷಣೆಗಾಗಿ ಸುವ್ಯವಸ್ಥಿತ ಮತ್ತು ಅತ್ಯಾಧುನಿಕ ಆಸ್ಪತ್ರೆಯನ್ನು ಶ್ರೀಮಠವೇ ಆರಂಭಿಸಿದೆ. ಭಕ್ತಾದಿಗಳಿಗೆ ಶುದ್ಧವಾದ ಕುಡಿಯುವ ನೀರು ಪೂರೈಸಲು ಜಲಶುದ್ಧೀಕರಣ ಘಟಕಗಳನ್ನೂ ಸ್ಥಾಪಿಸಲಾಗಿದೆ. ಭಕ್ತಾದಿಗಳಿಗೆ ಊಟದ ವ್ಯವಸ್ಥೆಯೂ ಇದೆ.
ಮಠದ ನಿತ್ಯಪೂಜೆಗಾಗಿಯೇ ತುಳಸಿವನ, ಹೂತೋಟಗಳನ್ನು ಬೆಳಸಲಾಗಿದೆ. ಈಹೊತ್ತು ಶ್ರೀಮಠದ ನೇತೃತ್ವವಹಿಸಿರುವ ಶ್ರೀಸುಶಮೀಂದ್ರ ತೀರ್ಥರು ದೇಗುಲದ ಮತ್ತು ಮಂತ್ರಾಲಯದ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ರಥಬೀದಿಯ ಎರಡೂ ಬದಿಗಳಲ್ಲೂ ಹೂತೋಟ ನಿರ್ಮಿಸಲಾಗಿದೆ.
ಶ್ರೀಗುರುರಾಯರು ಅನುಸರಿಸಿಕೊಂಡು ಬಂದ ವೇದಶಾಸ್ತ್ರಗಳ ಸಂಶೋಧನೆ ಇಂದೂ ಅವ್ಯಾಹತವಾಗಿ ನಡೆಯುತ್ತಿದೆ. ವೈದಿಕ ಪರಂಪರೆ ಉಳಿಸುವ ದೃಷ್ಟಿಯಿಂದ ಇಲ್ಲಿ ವೇದಾಧ್ಯಯನ ಸಂಶೋಧನಾ ಕೇಂದ್ರವನ್ನೂ ತೆರೆಯಲಾಗಿದೆ. ಇಲ್ಲಿ ನೂರಾರು ವೇದಾಧ್ಯಯನಿಗಳಿಗೆ ಉಚಿತ ಊಟ, ವಸತಿ, ವಸ್ತ್ರ ನೀಡಿ ವೇದ ಶಿಕ್ಷಣ ನೀಡಲಾಗುತ್ತಿದೆ.
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅತ್ಯಮೂಲ್ಯವಾದ ವೇದರತ್ನಗಳ ಗ್ರಂಥ ಭಂಡಾರವನ್ನೂ ತೆರೆಯಲಾಗಿದೆ. ಇಲ್ಲಿ ಒಂದು ಲಕ್ಷಕ್ಕೂ ಹೆಚ್ಚು ವೇದ, ಶಾಸ್ತ್ರ, ವ್ಯಾಕರಣ, ವಾಜ್ಞಯ ಪುಸ್ತಕಗಳಿವೆ. ಅಪಾರ ಸಂಖ್ಯೆಯ ತಾಳೆಯ ಗರಿಯ ಕೃತಿಗಳೂ ಇವೆ. ಹಸ್ತಪ್ರತಿಗಳೂ ಇವೆ. ಪಂಚಮುಖಿ ದರ್ಶನ ಎಂಬ ಧರ್ಮಛತ್ರವೂ ಮಂತ್ರಾಲಯದಲ್ಲಿದೆ.
ಬಳ್ಳಾರಿಯಿಂದ ಮಂತ್ರಾಲಯಕ್ಕೆ ಕೇವಲ ೧೧೫ ಕಿ.ಮೀಟರ್. ಮಂತ್ರಾಲಯಕ್ಕೆ ಹೋದಾಗ ವಿಶ್ವವಿಖ್ಯಾತ ಹಂಪಿ, ತೆಕ್ಕಲಕೋಟೆಗಳಿಗೂ ಹೋಗಿ ಬರಬಹುದು. ದೇಶದ ವಿವಿಧ ಭಾಗಗಳಿಂದ ರೈಲು (ಮಂತ್ರಾಲಯ ರೋಡ್‌ವರೆಗೆ), ಬಸ್ ಸೌಕರ್ಯ ಇದೆ. ಕರ್ನಾಟಕದ ಎಲ್ಲ ಪ್ರಮುಖ ನಗರಗಳಲ್ಲಿರುವ ವಿವಿಧ ಟ್ರಾವಲ್ಸ್‌ಗಳೂ ಮಂತ್ರಾಲಯಕ್ಕೆ ನಿತ್ಯ ಪ್ರವಾಸ ಸೌಕರ್ಯ ಒದಗಿಸಿವೆ. ಈ ಎಲ್ಲ ಅನುಕೂಲತೆ ಹಾಗೂ ರಾಯರ ಅನುಗ್ರಹದ ಫಲವಾಗಿ ದಕ್ಷಿಣ ಭಾರತದಲ್ಲಿ ಅತ್ಯಂತ ವೇಗವಾಗಿ ಹೆಚ್ಚು ಹೆಚ್ಚು ಭಕ್ತರನ್ನು ತನ್ನೆಡೆಗೆ ಆಕರ್ಷಿಸುತ್ತಿರುವ ತೀರ್ಥ ಕ್ಷೇತ್ರ ಮಂತ್ರಾಲಯವಾಗಿದೆ.

కామెంట్‌లు లేవు:

కామెంట్‌ను పోస్ట్ చేయండి